|
ಗ್ರಂಥಸೂಚಿ ಇತಿಹಾಸ
ಅನುವಾದ ಗ್ರಂಥಸೂಚಿಯ ದತ್ತನಿಧಿಯ ಆವಶ್ಯಕತೆ ಬಹಳ ಹಿಂದೆಯೇ ಕಂಡುಬಂತು. 2002ರಲ್ಲಿ ಭಾರತೀಯ ಭಾಷೆಗಳ
ಕೇಂದ್ರ ಸಂಸ್ಥೆ, ಸಾಹಿತ್ಯ ಅಕಾಡೆಮಿ ಮತ್ತು ನ್ಯಾಶನಲ್ ಬುಕ್ ಟ್ರಸ್ಟ್ನಂತಹ ಪ್ರಮುಖ ಸಂಸ್ಥೆಗಳು
anukriti.net ಎಂಬ ಒಂದು ಅನುವಾದ ಸೇವೆ ಮತ್ತು ಮಾಹಿತಿ ಸೈಟ್ನ್ನು ಅಭಿವೃದ್ಧಿಪಡಿಸಿದವು. ಸುಮಾರು
20,000 ಶೀರ್ಷಿಕೆಗಳನ್ನು ಕುರಿತ ಮಾಹಿತಿಯನ್ನು ಸಂಗ್ರಹಿಸಿ ಅನುಕೃತಿ ಅಡಿಯಲ್ಲಿ ಹುಡುಕಬಹುದಾದ ಒಂದು
ದತ್ತನಿಧಿಯನ್ನು ಅಭಿವೃದ್ಧಿಪಡಿಸಲಾಯಿತು. ಆದಾಗ್ಯೂ ದತ್ತಾಂಶದ ದೃಢೀಕರಣ ಮತ್ತು ಇನ್ನಷ್ಟು ಶೋಧನೆಯ
ಅಗತ್ಯವಿದೆ.
ಎನ್.ಟಿ.ಎಂ. ಜೂನ್ 2008 ರಂದು ಆರಂಭವಾಯಿತು ಮತ್ತು ಅನುಕೃತಿಯನ್ನು ಎನ್.ಟಿ.ಎಂ. ಜೊತೆಗೆ ವಿಲೀನಗೊಳಿಸಲಾಯಿತು.
ನಂತರ ಅನುವಾದ ಗ್ರಂಥಸೂಚಿಯ ದತ್ತನಿಧಿಯ ಸಿದ್ಧತೆಯ ಕೆಲಸ ಎನ್.ಟಿ.ಎಂ.ನಲ್ಲಿ ಮುಂದುವರಿಯಿತು. 2011ರ
ಆರಂಭದಲ್ಲಿ ಹೊಸ ಪ್ರಯತ್ನಗಳ ಮೂಲಕ ಯೋಜನೆ ನವೀಕರಣಗೊಂಡು ಒಂದು ಮಾರ್ಗಸೂಚಿಯನ್ನು ತಯಾರಿಸಿ ದತ್ತಾಂಶವನ್ನು
ವಿವಿಧ ಮೂಲಗಳಿಂದ ಸಂಗ್ರಹಿಸಲಾಯಿತು. ದತ್ತಾಂಶದ ನಿರಂತರ ಹರಿವನ್ನು ಖಚಿತಪಡಿಸಿಕೊಳ್ಳಲು ಹಲವಾರು
ಭಾರತೀಯ ವಿಶ್ವವಿದ್ಯಾಲಯಗಳು, ಪ್ರಕಟಣಾ ಲಯಗಳು, ಗ್ರಂಥಾಲಯಗಳು, ಅನುವಾದದ ಏಜೆನ್ಸಿಗಳು, ಸಾಹಿತ್ಯಿಕ
ಸಮಾಜಗಳು ಮತ್ತು ಸಂಸ್ಥೆಗಳ ಜೊತೆ ಸಂಪರ್ಕ ಮಾಡಲಾಯಿತು. ನಾವು ಸುಮಾರು 70,000 ಶೀರ್ಷಿಕೆಗಳನ್ನು
ಕುರಿತ ಮಾಹಿತಿಯನ್ನು ಸಂಗ್ರಹಿಸಿದ್ದು ಅವುಗಳನ್ನು ಶೋಧಿಸಿ ಡಿಜಿಟೈಸ್ ಮಾಡಬೇಕಾಗಿದೆ. 2011ರ ಮಧ್ಯದಲ್ಲಿ,
ಅನೇಕ ವರ್ಷಗಳಿಂದ ಭಾರತೀಯ ಭಾಷೆಗಳ ಅನುವಾದಿತ ಗ್ರಂಥಗಳನ್ನು ಕುರಿತ ಮಾಹಿತಿ ಸಂಕಲನ ಮಾಡುತ್ತಿರುವ
ಗುಜರಾತಿನ ವಡೋದರದ ಭಾಷಾ ಸಂಶೋಧನಾ ಕೇಂದ್ರದ ಪ್ರೊ. ಜಿ.ಎನ್. ದೇವಿಯವರು ತಮ್ಮ ಅಮೂಲ್ಯವಾದ ಸುಮಾರು
20,000 ಶೀರ್ಷಿಕೆಗಳ ಸಂಗ್ರಹಗಳನ್ನು ಎನ್.ಟಿ.ಎಂ.ಗೆ ನೀಡಲು ಮುಂದಾದರು.
ಅನುವಾದ ಗ್ರಂಥಸೂಚಿಗೆ ಲಭ್ಯವಿರುವ ಶೀರ್ಷಿಕೆಗಳನ್ನು ಡಿಜಿಟೈಸ್ ಮಾಡುವ ಭವಿಷ್ಯದ ಕೆಲಸಕ್ಕೆ ಸಂಬಂಧಿಸಿದಂತೆ
ಚರ್ಚಿಸಲು ಸೆಪ್ಟೆಂಬರ್ 2011ರಲ್ಲಿ ಎನ್.ಟಿ.ಎಂ. ತಂಡ ಪ್ರೊ. ದೇವಿ ಅವರೊಂದಿಗೆ ಸೇರಿ ಮೈಸೂರಿನಲ್ಲಿ
ಒಂದು ದಿನದ ಕಾರ್ಯಾಗಾರವನ್ನು ನಡೆಸಿತು. ಈ ಕಾರ್ಯಾಗಾರದಲ್ಲಿ ಪ್ರೊ. ದೇವಿಯವರು ಪ್ರತಿಯೊಂದು ಅನುವಾದಿತ
ಶೀರ್ಷಿಕೆಗೂ ಒಂದೊಂದು ಯೂನಿಕ್ ಐಡಿಯನ್ನು ನೀಡುವ ಆಲೋಚನೆ ಮಾಡಿ ಅದರ ವಿಧಾನವನ್ನೂ ಸೂಚಿಸಿದರು. ದತ್ತನಿಧಿಯ
ತಾಂತ್ರಿಕ ಅಂಶಗಳನ್ನು ಸೂಕ್ಷ್ಮವಾಗಿ ನೋಡಲು ನವೆಂಬರ್ 2011ರಂದು ಇನ್ನೊಂದು ಕಾರ್ಯಾಗಾರವನ್ನು ವಡೋದರದಲ್ಲಿ
ನಡೆಸಲಾಯಿತು. ಮೂಲ ಹಾಗೂ ಅನುವಾದ ಪಠ್ಯ ಕುರಿತ ಗರಿಷ್ಠ ಮಾಹಿತಿಯನ್ನು ಒದಗಿಸುವ ಉದ್ದೇಶದೊಂದಿಗೆ
ಒಂದು ಟೆಂಪ್ಲೇಟನ್ನು ವಿನ್ಯಾಸಗೊಳಿಸಲಾಯಿತು. ಎನ್.ಟಿ.ಎಂ. ಇದನ್ನು ಇನ್ನಷ್ಟು ಪರಿಷ್ಕರಿಸುವ ಕೆಲಸದಲ್ಲಿ
ತೊಡಗಿದೆ. ಪ್ರಸ್ತುತ, ಈ ವೆಬ್ಸೈಟ್ 25 ಭಾಷೆಗಳ 20,000 ಶೋಧಿತ ಶೀರ್ಷಿಕೆಗಳನ್ನು ಹೊಂದಿದೆ.
|
|
|
|