ಪ್ರಸ್ತಾವನೆ

ಭಾರತದಲ್ಲಿ ಅನುವಾದದ ಇತಿಹಾಸವು ಬಹಳ ಏರಿಳಿತಗಳಿಂದ ಕೂಡಿದೆ. ಮೊಟ್ಟಮೊದಲಿನ ಅನುವಾದಗಳು ಸಂಸ್ಕೃತ, ಪ್ರಾಕೃತ ಮತ್ತು ಪಾಳಿ, ಮತ್ತು ಆಗ ತಾನೇ ಉದಯಿಸುತ್ತಿದ್ದ ಪ್ರಾದೇಶಿಕ ಭಾಷೆಗಳ ನಡುವೆ ಮಾತ್ರ ಅಲ್ಲದೆ, ಆ ಪ್ರಾದೇಶಿಕ ಭಾಷೆಗಳು ಮತ್ತು ಅರಾಬಿಕ್ ಮತ್ತು ಪರ್ಷಿಯನ್ ಬಾಷೆಗಳ ನಡುವೆ ಆಗಿದ್ದಿರಬಹುದು. ಪಂಚತಂತ್ರ, ಅಷ್ಚಾಂಗಹೃದಯ, ಅರ್ಥಶಾಸ್ತ್ರ, ಹಿತೋಪದೇಶ, ಯೋಗಸೂತ್ರ, ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳಂತಹ ಭಾರತದ ಕಥನ ಮತ್ತು ಜ್ಞಾನಾಧಾರಿತ ಪಠ್ಯಗಳು ಎಂಟನೇಯ ಮತ್ತು ಹತ್ತೊಂಬತ್ತನೇ ಶತಮಾನಗಳ ನಡುವೆ ಅರಾಬಿಕ್ ಭಾಷೆಗೆ ಭಾಷಾಂತರಿಸಲ್ಪಟ್ಟವಲ್ಲದೆ ಪರ್ಷಿಯನ್ ಮತ್ತು ಭಾರತದ ಗ್ರಂಥಗಳ ನಡುವೆಯೂ ಅತ್ಯಧಿಕವಾದ ವಿನಿಮಯ ಇತ್ತು. ಸಂಸ್ಕೃತ ಗ್ರಂಥಗಳು, ಅದರಲ್ಲಿಯೂ, ಭಗವದ್ಗೀತೆ ಮತ್ತು ಉಪನಿಷದ್ ಗ್ರಂಥಗಳು ಭಕ್ತಿಕಾಲದಲ್ಲಿ ಭಾರತದ ಇತರ ಭಾಷೆಗಳ ಜೊತೆ ಹೊಂದಿದ್ದ ಸಂಪರ್ಕದ ಫಲವಾಗಿ ಮರಾಠಿ ಸಂತ ಕವಿ ಜ್ಞಾನೇಶ್ವರನ ಭಗವದ್ಗೀತೆಯ ಅನುವಾದ ಜ್ಞಾನೇಶ್ವರಿ ಮತ್ತು ಮಹಾಕಾವ್ಯಗಳ ಇತರೆ ಅನೇಕ ಅನುವಾದಗಳು ಶ್ರೇಷ್ಠ ಪ್ರಾದೇಶಿಕ ಭಾಷಾಗ್ರಂಥಗಳ ರಚನೆಗೆ ಕಾರಣವಾದವು. ಉದಾಹರಣೆಗಾಗಿ ಪಂಪ, ಕಂಬರ್, ಮೊಲ್ಲ, ಎಳು,ತಚ್ಚನ್, ತುಳಸೀ ದಾಸ, ಪ್ರೇಮಾನಂದ, ಏಕನಾಥ, ಬಲರಾಮ ದಾಸ, ಮಾಧವ ಕಂಡಳಿ ಅಥವಾ ಕೃತ್ತಿಭಾಸರ ರಾಮಾಯಣದ ರೂಪಾಂತರಗಳನ್ನು ನೋಡಬಹುದು.

ವಸಾಹತುಶಾಹಿ ಕಾಲದಲ್ಲಿ ಭಾರತೀಯ ಭಾಷೆಗಳು, ಆದರಲ್ಲಿಯೂ, ಸಂಸ್ಕೃತ ಮತ್ತು ಯೂರೋಪಿಯನ್ ಭಾಷೆಗಳ ನಡುವಿನ ಭಾಷಾಂತರ ಪ್ರಕ್ರಿಯೆಯು ದಿಢೀರ್ ಬೆಳವಣಿಗೆಯನ್ನು ಕಂಡಿತು. ಜರ್ಮನ್, ಫ್ರೆಂಚ್, ಇಟಾಲಿಯನ್, ಸ್ಪಾನಿಷ್ ಮತ್ತು ಭಾರತೀಯ ಭಾಷೆಗಳ ನಡುವೆ ವಿನಿಮಯ ಇದ್ದಿತ್ತಾದರೂ, ವಸಾಹತು ದೊರೆಗಳ ಭಾಷೆಯಾದ ಆಂಗ್ಲಭಾಷೆಯು ವಿಶೇಷವಾದ ಮಾನ್ಯತೆಯನ್ನು ಪಡೆದಿತ್ತು. ಬ್ರಿಟಿಷರ ಕಾಲದಲ್ಲಿನ ಆಂಗ್ಲಭಾಷೆಯ ಅನುವಾದದ ಹಂತವು ವಿಲಿಯಂ ಜೋನ್ಸ್ ನ ಕಾಳಿದಾಸನ ಅಭಿಜ್ಞಾನ ಶಾಕುಂತಲೆಯ ಅನುವಾದದೊಡನೆ ಉಚ್ಛ್ರಾಯ ಸ್ಥಿತಿಯನ್ನು ತಲುಪಿತು. ಅಲ್ಲದೆ ಜೋನ್ಸನ ಅನುವಾದದೊಡನೆ, ಅಭಿಜ್ಞಾನ ಶಾಕುಂತಲೆಯು ಭಾರತದ ಪರಂಪರೆಯ ಹೆಮ್ಮೆಯ ದ್ಯೋತಕವಾಗಿಯೂ ಮತ್ತು ಭಾರತೀಯ ಸಂವೇದನೆಯನ್ನು ಬಿಂಬಿಸುವ ಅತ್ಯಂತ ಮಹತ್ವದ ಕೃತಿಗಳಲ್ಲಿ ಒಂದಾಗಿಯೂ ಹೊರಹೊಮ್ಮಿತು. ಹತ್ತೊಂಬತ್ತನೇಯ ಶತಮಾನದಲ್ಲಿ ಶಾಕುಂತಲೆಯು ಹತ್ತಕ್ಕಿಂತಲೂ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಅನುವಾದಗೊಳ್ಳಲು ಮೇಲಿನ ಕಾರಣವು ಅನುವು ಮಾಡಿಕೊಟ್ಟಿತು. ವಸಾಹತು ದೊರೆಗಳ ಭಾಷಾಂತರದ ಪ್ರಯತ್ನಗಳು ಪೌರ್ವಾತ್ಯ ಸಿದ್ದಾಂತಗಳಿಂದ ಮತ್ತು ಭಾರತವನ್ನಾಳುವ, ಅದನ್ನು ವಿಶದೀಕರಿಸುವ, ಅರ್ಥೈಸಿಕೊಳ್ಳುವ ಅವಶ್ಯಕತೆಗಳಿಂದ ನಿರ್ಧರಿತವಾಗಿತ್ತು. ಬ್ರಿಟಿಷರು ತಮ್ಮದೇ ಆದಂತಹ ಭಾರತದ ಆವೃತ್ತಿಯನ್ನು ಸೃಷ್ಟಿಸಿದ ಹಾಗೆಯೇ ಆಂಗ್ಲ ಭಾಷೆಗೆ ಭಾಷಾಂತರ ಮಾಡುತ್ತಿದ್ದ ಭಾರತೀಯ ಅನುವಾದಕರು ಬ್ರಿಟಿಷರ ತಿಳುವಳಿಕೆಯನ್ನು ವಿಸ್ತರಿಸಿದರು, ಪರಿಷ್ಕರಿಸಿದರು ಮತ್ತು ಕೆಲವೊಮ್ಮೆ ಪ್ರಶ್ನಿಸಿ ಪ್ರತಿಭಟಿಸಿದರು. ಈ ಕದನ ಸಮಕಾಲಿನ ಕೃತಿಗಳ ಮೇಲೆ ಆಧರಿತವಾಗಿರದೆ, ಭಾರತದ ಪುರಾತನ ಕೃತಿಗಳ ಸುತ್ತ ನಡೆಯುತ್ತಿತ್ತು. ರಾಜಾರಾಮ ಮೋಹನರಾಯರ ಶಂಕರರ ವೇದಾಂತ ಮತ್ತು ಕೇನ ಮತ್ತು ಇಶಾವಾಸ್ಯ ಉಪನಿಷದ್ ಗ್ರಂಥಗಳ ಅನುವಾದಗಳು ಭಾರತೀಯ ಕೃತಿಗಳ ಆಂಗ್ಲ ಅನುವಾದ ಕಾರ್ಯಕ್ಷೇತ್ರದಲ್ಲಿ ಭಾರತೀಯ ವಿದ್ವಾಂಸರ ಪ್ರಪ್ರಥಮ ಪ್ರಯತ್ನಗಳಾಗಿದ್ದವು. ರಾಜಾರಾಮ ಮೋಹನರಾಯರ ಅನುವಾದಗಳ ನಂತರ ಆರ್.ಸಿ. ದತ್ತರ ಋಗ್ವೇದ, ಉಪನಿಷದ್, ರಾಮಾಯಣ, ಮಹಾಭಾರತ ಮತ್ತು ಇತರ ಪುರಾತನ ಸಂಸ್ಕೃತ ನಾಟಕಗಳ ಅನುವಾದಗಳು ಹೊರಬಂದವು. ಭಾರತೀಯರು ವಿಧೇಯರು ಮತ್ತು ಆಲಸೀಗಳು ಎಂಬ ಕಾಲ್ಪನಿಕ ಮತ್ತು ಪ್ರಯೋಜನವಾದಿ ಅಭಿಪ್ರಾಯಗಳನ್ನು ಪ್ರಶ್ನಿಸುವುದೇ ಈ ಅನುವಾದಗಳ ಮುಖ್ಯ ಗುರಿಯಾಗಿತ್ತು. ಇವರೀರ್ವರ ನಂತರ ದೀನಬಂಧು ಮಿತ್ರ, ಅರೋಬಿಂದೋ, ರವೀಂದ್ರನಾಥ ಟಾಗೋರರನ್ನು ಸೇರಿ ಇನ್ನೂ ಹಲವರ ಅನುವಾದಗಳ ಮಹಾಪೂರವೇ ಹರಿದುಬಂದಿತು. ಸಣ್ಣ ಪ್ರಮಾಣದಲ್ಲಿಯೇ ಆದರೂ, ಭಾರತೀಯ ಭಾಷೆಗಳ ನಡುವಿನ ಅನುವಾದವೂ ಇದೇ ಕಾಲದಲ್ಲಿ ಪ್ರಾರಂಭವಾಯಿತು.

ಆದಾಗ್ಯೂ, ಆಂಗ್ಲಭಾಷೆ ಇಂದಿಗೂ ಶಿಕ್ಷಿತ ವರ್ಗಕ್ಕೆ ಕೂಡ ಸರಿಯಾಗಿ ಕೈಗೆಟುಕದಿರುವುದು ಒಂದು ವಾಸ್ತವ ಸಂಗತಿಯಾಗಿದೆ. ಪ್ರಮುಖವಾದ ಸಾಹಿತ್ಯಿಕ ಮತ್ತು ಜ್ಞಾನಾಧಾರಿತ ಪುಸ್ತಕಗಳನ್ನು ಭಾರತೀಯ ಭಾಷೆಗಳಲ್ಲಿ ಭಾಷಾಂತರಿಸುವುದರ ಮುಖಾಂತರ ಮಾತ್ರವೇ ಈ ಮೇಲಿನ ವರ್ಗಗಳನ್ನು ಸಬಲೀಕರಿಸಬಹುದು. ಈ ನಿಟ್ಟಿನಲ್ಲಿ ಅನುವಾದದ ಬಗೆಗಿನ ಗಾಂಧೀಜಿಯವರ ಅಭಿಪ್ರಾಯಗಳು ಇಲ್ಲಿ ಉಲ್ಲೇಖಿಸಲು ಸಮಂಜಸವಾದುದಾಗಿವೆ, “ಆಂಗ್ಲಭಾಷೆಯನ್ನು ವ್ಯಾಪಾರ ಮತ್ತು ವಾಣಿಜ್ಯದ ಭಾಷೆಯನ್ನಾಗಿ ಪರಿಗಣಿಸಿರುವುದರಿಂದಾಗಿ ಕೆಲವು ಮಂದಿ ಅದನ್ನು ಕಲಿಯುವುದು ಅವಶ್ಯಕವಾಗಿದೆ. ಅಂತಹವರು (ಆಂಗ್ಲ ಭಾಷೆಯಲ್ಲಿ) ಪ್ರಾವೀಣ್ಯತೆಯನ್ನು ಪಡೆಯಬೇಕಾಗಿ ನಾನು ಪ್ರೇರೇಪಿಸಲು ಇಚ್ಚಿಸುತ್ತೇನೆ ಮತ್ತು ಅವರು ಆಂಗ್ಲಭಾಷೆಯ ಉತೃಷ್ಟ ಕೃತಿಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡುವರೆಂದು ನಿರೀಕ್ಷಿಸುತ್ತೇನೆ”. ಆಂಗ್ಲಭಾಷೆಯನ್ನು ಶೈಕ್ಷಣಿಕ ಮಾಧ್ಯಮವನ್ನಾಗಿ ಅಳವಡಿಸುವುದು ಭಾರತೀಯ ಭಾಷೆಗಳ ಬೆಳವಣಿಗೆಗೆ ಮಾರಕವಾಗಬಹುದೆಂದು ಕೂಡ ಗಾಂಧೀಜಿಯವರು ಅಭಿಪ್ರಾಯ ಪಟ್ಟಿದ್ದರು.

ಎಲ್. ಎಂ. ಖುಬ್‌ಚಂದಾನಿ ಹೇಳುವ ಹಾಗೆ, ತನ್ನ ಪಾಠ ಶಾಲೆ ಮತ್ತು ಮಕ್ತಬ್ಗಳ ಪರಿಕಲ್ಪನೆಗಳ ಮೂಲಕ ವಸಾಹತು - ಪೂರ್ವ ಭಾರತದ ಶಿಕ್ಷಣ ವ್ಯವಸ್ಥೆ ಶಾಲಾ ಶಿಕ್ಷಣವನ್ನು ಪ್ರಾಥಮಿಕ ಸಮಾಜೀಕರಣದ ವಿಸ್ತರಣೆಯೆಂದು ಪರಿಗಣಿಸಿ ದೇಶೀ ಉಪಭಾಷೆಗಳಿಂದ ಶಿಷ್ಟ ಶೈಲಿಗಳವರೆಗೆ ಇರುವ, ಪರಸ್ಪರ ಗ್ರಾಹ್ಯವಾದ ಭಾಷಾ ವೈವಿಧ್ಯತೆಗಳ ಸರಪಳಿಯನ್ನು ಬೆಂಬಲಿಸುವ ಭಾಷಾ ಕೌಶಲ್ಯಗಳ ಶ್ರೇಣಿಯನ್ನು ನಿರೂಪಿಸಿತು. ಹಲವು ಕ್ರಿಯಾತ್ಮಕವಾಗಿ ಪ್ರಚೋದಿಸಲ್ಪಟ್ಟ ಭಾಷೆಗಳು ಮತ್ತು ಲಿಪಿಗಳು ಕಲಿಯುವವನನ್ನು ಶ್ರೀಮಂತ ಮತ್ತು ಸತತ ಬದಲಾವಣೆಗೆ ಒಳಪಡಬಲ್ಲ ಭಾಷಿಕ ಭಂಡಾರದಿಂದ ಸಜ್ಜುಗೊಳಿಸಿತು. ಭಾರತದ ಸಾಂಪ್ರದಾಯಿಕ ಭಾಷಾವಾರು ವೈವಿಧ್ಯತೆಯು ಅಹಿತಕರವಾದುದರಿಂದಾಗಿ, ವಸಾಹತು ದೊರೆಗಳು ಏಕತ್ವವಾದದ ಪರಿಹಾರಗಳನ್ನು ಪ್ರಸ್ತಾಪಿಸುವುದರ ಮುಖಾಂತರ ಆಂಗ್ಲಭಾಷೆ ಮತ್ತು ಪ್ರಾದೇಶಿಕ ಭಾಷೆಗಳ ನಡುವೆ ವೈರುಧ್ಯತೆಯನ್ನು ಸೃಷ್ಟಿಸಿದರು. ಮೆಕಾಲೆಯ “ಮಿನಟ್ ಆನ್ ಇಂಡಿಯನ್ ಎಜುಕೇಷನ್” (1835) ಮತ್ತು ಅವನ ಪೂರ್ವಾಧಿಕಾರಿಗಳ ಕಾರ್ಯಗಳು ಭಾರತೀಯ ಭಾಷೆಗಳನ್ನು ಕಡೆಗಣಿಸಿದವು. ಆದರೆ ವಸಾಹತೋತ್ತರ ಕಾಲದಲ್ಲಿ ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಬಳಸಿ ಅದಕ್ಕೆ ಪ್ರಾಧಾನ್ಯತೆಯನ್ನು ನೀಡಲಾಯಿತು ಮತ್ತು ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಒಂದು ಮಗು ತನ್ನ ತಾಯಿನುಡಿಯಲ್ಲಿ ಹೆಚ್ಚು ಉತ್ತಮವಾಗಿ ಮತ್ತು ಹೆಚ್ಚು ವೇಗವಾಗಿ ಕಲಿಯುತ್ತದೆ ಎಂಬ ಯುನೆಸ್ಕೊದ ಶಿಫಾರಸ್ಸು ಅನೇಕ ಭಾಷಾ ಯೋಜನಾ ಪ್ರಾಧಿಕಾರಿಗಳಿಂದ ಉಲ್ಲೇಖಿಸಲ್ಪಟ್ಟಿತು.

ಹಾಗಾಗಿ ಸಮಾಜದಲ್ಲಿ ಪ್ರತಿನಿಧಿಸಲ್ಪಟ್ಟಿರುವ ವಿವಿಧ ಭಾಷೆಗಳಿಗೆ (ನಮ್ಮ ಸಮಾಜ ಮತ್ತು ನಮ್ಮ ಶಾಲೆಗಳಲ್ಲಿ) ಸ್ಥಳಾವಕಾಶವನ್ನು ಸೃಷ್ಟಿಸಬೇಕು. ಇದನ್ನು ಸಾಧ್ಯಪಡಿಸಬೇಕಾದರೆ ಅನೇಕ ಸಾಹಿತ್ಯಿಕ ಮತ್ತು ಜ್ಞಾನಾಧಾರಿತ ಪುಸ್ತಕಗಳ ಅನುವಾದಗಳು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸುಲಭವಾಗಿ ಲಭ್ಯವಾಗಬೇಕು ಮತ್ತು ಅಂತಹ ಪಠ್ಯಗಳನ್ನು ಭಾರತದ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದ ಮಾಡುವುದು ಕೂಡ ಬಹಳ ಮುಖ್ಯವಾಗಿದೆ - ಜ್ಞಾನಾಧಾರಿತ ಪಠ್ಯಗಳನ್ನು ಭಾರತೀಯ ಭಾಷೆಗಳಿಗೆ, ‘ದಾತ ಭಾಷೆ’ಗಳೆಂದು ಹೇಳಲ್ಪಡುವ ಪಾಶ್ಚಾತ್ಯ ಭಾಷೆಗಳಿಂದ ಶ್ರೇಣೀಕೃತ ರೀತಿಯಲ್ಲಿ ಅಲ್ಲದೆ, “ಹೆಗಲೆಣೆ ಅನುವಾದ”ದ ಮುಖಾಂತರ ಅನುವಾದಿಸಬೇಕು. (ಸಿಂಗ್ - 1990).

ನಮ್ಮ ದೃಢ ನಂಬಿಕೆಯೆಂದರೆ, ಉತ್ಕೃಷ್ಟ ಜ್ಞಾನವನ್ನು ಅವರವರ ಮಾತೃಭಾಷೆಯ ಮುಖಾಂತರ ಗಳಿಸಲು ತವಕವಾಗಿರುವಂತಹ ಜನಸಾಮಾನ್ಯರಿಗೆ ಕೂಡ ಈ ಜ್ಞಾನವು ಸುಲಭವಾಗಿ ದೊರಕುವಂತಿರಬೇಕು. ಈ ಆಧಾರ ತತ್ವವೇ ರಾಷ್ಟೀಯ ಅನುವಾದ ಮಿಷನ್ (NTM) ಎಂಬ ಯೋಜನೆಗೆ ನಾಂದಿಯನ್ನು ಹಾಡಿತು.