ಸಂದರ್ಭ

ಪ್ರಧಾನಮಂತ್ರಿಯವರ ಹೇಳಿಕೆ
ರಾಷ್ಟ್ರೀಯ ಅನುವಾದ ಮಿಷನ್ನ ವಿಚಾರವು ಮೂಲತಃ ಭಾರತದ ಪ್ರಧಾನ ಮಂತ್ರಿಯವರಿಂದ ಬಂದಿತು. ಅವರು ರಾಷ್ಟ್ರೀಯ ಜ್ಞಾನ ಆಯೋಗದ ಪ್ರಥಮ ಸಭೆಯಲ್ಲಿ, ಹೇಗೆ ಅನೇಕ ಕ್ಲಿಷ್ಟಕರ ಕ್ಷೇತ್ರಗಳಲ್ಲಿ ಅನುವಾದಿತ ಕೃತಿಗಳ ಲಭ್ಯತೆಯು ಹೆಚ್ಚಿನ ಜ್ಞಾನಗಳಿಕೆಯನ್ನು ದೃಢಪಡಿಸುತ್ತದೆಂದು ಹೇಳಿದರು. ಶಿಕ್ಷಣ ಮತ್ತು ನಿರಂತರ ಕಲಿಕೆಯಲ್ಲಿ ಸಾಮಾನ್ಯ ಜನರ ಭಾಗವಹಿಸುವಿಕೆಯನ್ನು ವಿಸ್ತರಿಸುವುದು ಮತ್ತು ದೃಢಪಡಿಸುವುದು ಅಂದಿನ ವಿಷಯವಾಗಿತ್ತು. ಶ್ರೀ ಸ್ಯಾಮ್ ಪಿಟ್ರೋಡರನ್ನು ಅಧ್ಯಕ್ಷರನ್ನಾಗಿ ಹೊಂದಿದ್ದಂತಹ ಈ ಆಯೋಗ, ಭಾರತದಲ್ಲಿ ಶಿಕ್ಷಣಕ್ಕಾಗಿ ಭಾಷಾಂತರದ ಕಾರ್ಯವನ್ನು ಪ್ರೋತ್ಸಾಹಿಸಲು ಬಹಳ ತುರ್ತಾಗಿ ಒಂದು ಪ್ರತ್ಯೇಕ ಸಂಸ್ಥೆ ಅಥವಾ ಮಿಷನ್ನ ಸ್ಥಾಪನೆಯ ಅವಶ್ಯಕತೆಯನ್ನು ಮನಗಂಡಿತು.

ಸಂದರ್ಭ
ಭಾಷಾಂತರವು ಒಂದು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆಯಾದರೂ, ಭಾರತದಲ್ಲಿ ಈ ಚಟುವಟಿಕೆಯು ಅನೇಕ ಏರಿಳಿತಗಳಿಂದ ಕೂಡಿರುವುದರಿಂದಾಗಿ ಈ ಮಹತ್ವದ ಕ್ಷೇತ್ರದಲ್ಲಿ ಫಲದಾಯಕ ವಾದಂತಹ ಸಾರ್ವಜನಿಕ ಪ್ರವೇಶಿಕೆಯ ಅವಶ್ಯಕತೆ ಇದೆ. ಈ ಕ್ಷೇತ್ರದಲ್ಲಿನ ಏರಿಳಿತಗಳು ವಿವಿಧ ಶಾಸ್ತ್ರಗಳಲ್ಲಿ ಮತ್ತು ಭಾಷೆಗಳಲ್ಲಿ ಮಾತ್ರವಲ್ಲದೆ ಗುಣಮಟ್ಟ, ವಿತರಣೆ ಹಾಗೂ ಅನುವಾದಗಳ ಲಭ್ಯತೆಗಳಲ್ಲಿಯೂ ಇವೆ. ಈಗಾಗಲೇ ಇರುವಂತಹ ಹಾಗೂ ಹೊಮ್ಮುತ್ತಿರುವ ಕ್ಷೇತ್ರಗಳಾದ ಸಾಹಿತ್ಯ, ಅಪ್ಪಟ ವಿಜ್ಞಾನಗಳು, ಅನ್ವಯಿಕ ವಿಜ್ಞಾನಗಳು, ಸಮಾಜವಿಜ್ಞಾನ, ಕಾನೂನುಶಾಸ್ತ್ರ, ವೈದ್ಯಶಾಸ್ತ್ರ, ನಿರ್ವಹಣಾ ಶಾಸ್ತ್ರ, ತಂತ್ರಜ್ಞಾನ ಇತ್ಯಾದಿಗಳಲ್ಲಿ ಭಾಷಾಂತರ ಕಾರ್ಯಕ್ಕೆ ಗುರುತಿಸದೆ ಹೋಗಿರುವಂತಹ ಬೇಡಿಕೆ ಇದೆ.

ಇದಲ್ಲದೆ, ಭಾಷಾಂತರದ ಮುಖಾಂತರ ಲಭ್ಯವಿರುವಂತಹ ಮಾಹಿತಿಯು ಕೊರತೆಯುಳ್ಳದ್ದಾಗಿದ್ದು ಸಮಂಜಸವಾಗಿಲ್ಲ. ಉದ್ದೇಶಿತ ಓದುಗರು ಬಹಳ ಹೆಚ್ಚಾಗಿ ಹರಡಿ ಅಸಂಘಟಿತರಾಗಿರುವುದರಿಂದಾಗಿ ಮತ್ತು ಮಾರುಕಟ್ಟೆಯಲ್ಲಿ ಅನುವಾದಗಳ ಲಭ್ಯತೆಯನ್ನು ಸುನಿಶ್ಚಿತಮಾಡದೆ ಅವುಗಳನ್ನು ಅಪರೂಪವಾಗಿ ಪರಾಮರ್ಶಿಸುವುದರಿಂದ ಅನುವಾದಗಳ ಪ್ರಸರಣವು ಅತೃಪ್ತಿಕರವಾಗಿದೆ. ಒಳ್ಳೆಯ ಗುಣಮಟ್ಟದ ಅನುವಾದಗಳ ಸರಿಯಾದ ಪ್ರಸರಣವು ಮಾತ್ರ ಮಟ್ಟಗುರುತನ್ನು ಸೃಷ್ಟಿಸಬಲ್ಲುದು ಮತ್ತು ಅನುವಾದ ಕ್ಷೇತ್ರದಲ್ಲಿ ನಡೆಯುತ್ತಿರುವ ಖಾಸಗೀ ಚಟುವಟಿಕೆಗಳಿಗೆ ಸರಿಯಾದ ಪ್ರೋತ್ಸಾಹವನ್ನು ಕೊಡಬಲ್ಲದು. ಈ ಸನ್ನಿವೇಶ ವಿವಿಧ ಶಾಸ್ತ್ರಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಅನುವಾದಗಳ ಲಭ್ಯತೆಯನ್ನು ದೃಢಪಡಿಸುವುದರಲ್ಲಿ ಖಾಸಗೀ ಹೆಜ್ಜೆಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಪ್ರಾರಂಭಿಸಲು ಬೇಕಾದಂತಹ ಕ್ರಮಗಳ ರೂಪದಲ್ಲಿ ಮಿಷನೋಪಾದಿಯಲ್ಲಿ ಸಾರ್ವಜನಿಕ ಪ್ರವೇಶಿಕೆಯನ್ನು ಬೇಡುತ್ತದೆ. ಭಾಷಾಂತರದ ಕಾರ್ಯಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅನೇಕ ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸಬಲ್ಲವು. ಹೀಗಾಗಿ ಶಿಕ್ಷಿತ ನಿರುದ್ಯೋಗಿ ವರ್ಗವು ಈ ಮುಖಾಂತರ ಜನಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಬಲ್ಲರಲ್ಲದೆ ಒಳ್ಳೆಯ ಸಂಭಾವನೆಯ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು.

ಭಾಷಾಂತರದ ಬಗೆಗಿನ ಈ ಅರಿವು, ರಾಷ್ಟ್ರೀಯ ಜ್ಞಾನ ಆಯೋಗವು ಪ್ರೋ. ಜಯತಿ ಘೋಷ್ರನ್ನು ಮುಖಂಡರನ್ನಾಗಿ ಹೊಂದಿದ ಕಾರ್ಯಕಾರಿ ಮಂಡಳಿಯೊಂದನ್ನು ರಚಿಸುವಂತೆ ಪ್ರೇರೇಪಿಸಿತು. ಈ ಕಾರ್ಯಕಾರಿ ಮಂಡಳಿಯು ಭಾಷಾಂತರ ಪ್ರಕ್ರಿಯೆ, ಅದರ ಪ್ರಕಾಶನ ಮತ್ತು ಪ್ರಸರಣದಲ್ಲಿ ಭಾಗಿಯಾಗಿರುವಂತಹ ವಿವಿಧ ಜನರು ಮತ್ತು ಸಂಸ್ಥೆಗಳನ್ನು ಒಗ್ಗೂಡಿಸುವ ಸಲುವಾಗಿ ರಚಿಸಲ್ಪಟ್ಟಿತು. ಇದು ಮುಖ್ಯವಾದ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಣ ತಜ್ಞರು, ಭಾಷಾ ವಿಜ್ಞಾನಿಗಳು, ಅನುವಾದಕರು, ಪ್ರಕಾಶಕರು ಮತ್ತು ಭಾರತದಲ್ಲಿ ಭಾಷಾಂತರ ಪ್ರಕ್ರಿಯೆಯ ಜೊತೆ ಬೆಸೆದುಕೊಂಡಿರುವ ಇತರ ಅನೇಕರನ್ನು ಒಳಗೊಂಡಿತ್ತು. ಮಂಡಳಿಯು ಫೆಬ್ರವರಿ, 2006ರಲ್ಲಿ ದಿಲ್ಲಿಯಲ್ಲಿ ಸಭೆಗಳನ್ನು ನಡೆಸಲು ಪ್ರಾರಂಭಿಸಿದೊಡನೆ, ಪ್ರೊ. ಉದಯ ನಾರಾಯಣ ಸಿಂಗ್‌ರವರು ಈ ಕ್ಷೇತ್ರದ ವಿಶಾಲ ರೂಪುರೇಖೆಗಳ ವಿವರಣೆಯನ್ನು ನೀಡಿದರು. ಮೂರ್ಚ್ 6, 2006ರಂದು ರಾಷ್ಟ್ರೀಯ ಅನುವಾದ ಮಿಷನ್ನಿನ ಸಮಿತಿಯ ಸದಸ್ಯ ಸಂಚಾಲಕರಾಗಿರುವ ಪ್ರೊ. ಜಯತಿ ಘೋಷ್ ರವರು ರಾಷ್ಟ್ರೀಯ ಜ್ಞಾನ ಆಯೋಗದ ಶಿಫಾರಸ್ಸುಗಳು ಮತ್ತು ಪರಿಷ್ಕರಿಸಿದ ಪ್ರಸ್ತಾವವನ್ನು ಒಳಗೊಂಡಂತಹ ಪತ್ರವನ್ನು ಯೋಜನಾ ಆಯೋಗದ ಉಪಾಧ್ಯಕ್ಷರಿಗೆ ಬರೆದರು. ತದನಂತರ, ಮಂಡಳಿಯು ಅನೇಕ ಸಭೆಗಳನ್ನು ನಡೆಸಿತು ಮತ್ತು ಏಪ್ರಿಲ್ 12-13, 2007 ರಂದು ದೊಡ್ಡ ಪ್ರಮಾಣದ ಎರಡು ದಿನದ ಕಾರ್ಯಗಾರವನ್ನು ಭಾರತೀಯ ಭಾಷಾ ಸಂಸ್ಥೆಯಲ್ಲಿ ನಡೆಸಲಾಯಿತು. ಏಪ್ರಿಲ್ 19, 2006 ರಂದು ಯೋಜನಾ ಆಯೋಗವು ಪತ್ರ ಸಂಖ್ಯೆ p. 11060/4/2005-Edn ದ ಮುಖಾಂತರ ಪರಿಷ್ಕರಿಸಿದ ಪ್ರಸ್ತಾಪದ ಬಗ್ಗೆ ವ್ಯಾಖ್ಯಾನವನ್ನು ಮಾಡುತ್ತಾ ಐದು ಪ್ರಶ್ನೆಗಳನ್ನು ಮುಂದಿಟ್ಟಿತು. ಈ ಐದು ಪ್ರಶ್ನೆಗಳಿಗೆ ಉತ್ತರವನ್ನೂ ಒದಗಿಸಲಾಯಿತು. ಈ ಮಧ್ಯೆ ಅನೇಕ ಸಮಾಜ ವಿಜ್ಞಾನ ತಜ್ಞರು, ವಿಶೇಷವಾಗಿ ಸೆಂಟರ್ ಫಾರ್ ದ ಸ್ಟಡೀಸ್ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ಮತ್ತು ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್ (ICHR) ದಂತಹ ಇತರ ಸಂಸ್ಥೆಗಳ ವಿಶೇಷಜ್ಞರಿಂದ ಇದರ ಬಗೆಗೆ ವ್ಯಾಖ್ಯಾನ, ಟಿಪ್ಪಣಿಗಳನ್ನು ಪಡೆದುಕೊಳ್ಳಲಾಯಿತು. ಇವು ಹಲವಾರು ಚರ್ಚೆಯ ವಿಷಯಗಳನ್ನು ಮುಂದಿಟ್ಟವಲ್ಲದೆ, ರಾಷ್ಟ್ರೀಯ ಅನುವಾದ ಮಿಷನ್ನಿನ ವ್ಯಾಪ್ತಿ ಮತ್ತು ರಚನೆಯ ಬಗೆಗೆ ಅನೇಕ ಸೃಜನಾತ್ಮಕ ಸಲಹೆಗಳನ್ನಿತ್ತವು. ಈ ಸಲಹೆಗಳಲ್ಲಿ ಕೆಲವನ್ನು ಈ ವಿಸ್ತೃತ ಯೋಜನಾ ವರದಿಯಲ್ಲಿ ಸೇರಿಸಲಾಗಿದೆ. ಭಾಷಾಂತರ ಕಾರ್ಯದಲ್ಲಿ ತೊಡಗಿಸಿಕೊಂಡಿರುವಂತಹ ಅನೇಕ ಪ್ರಕಾಶನಗಳಿಂದ ಜೂನ್ 21 ಮತ್ತು ಜುಲೈ 3, 2006 ರಂದು ಸಲಹೆಗಳನ್ನು ಪಡೆಯಲಾಯಿತು. ತದನಂತರ, ಆಗಸ್ಟ್ 31, 2006 ರಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಭಾಷೆ ಮತ್ತು ಪುಸ್ತಕಗಳನ್ನು ಪ್ರೋತ್ಸಾಹಿಸುವ ಕಾರ್ಯಕಾರಿ ಮಂಡಳಿಯು ಹನ್ನೊಂದನೆಯ ಯೋಜನೆಗಾಗಿ ಯೋಜನಾ ಆಯೋಗಕ್ಕೆ ಸಲ್ಲಿಸಿದ ಶಿಫಾರಸುಗಳ ಮುಖಾಂತರ ರಾಷ್ಟ್ರೀಯ ಅನುವಾದ ಮಿಷನ್ನಿನ ಪರಿಕಲ್ಪನೆಯನ್ನು ದೃಢೀಕರಿಸಿತು. ನಂತರ, ಸೆಪ್ಟಂಬರ್ 1, 2006 ರಂದು ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷರಾದಂತಹ ಶ್ರೀ ಸ್ಯಾಮ್ ಪಿಟ್ರೋಡರವರು ರಾಷ್ಟ್ರೀಯ ಅನುವಾದ ಮಿಷನ್ನಿನ ಬಗೆಗೆ ವಿವರಗಳನ್ನು ಒಳಗೊಂಡಿರುವ ಪತ್ರವನ್ನು ಪ್ರಧಾನ ಮಂತ್ರಿಯವರಿಗೆ ಬರೆದರು, ನಂತರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಒಂದು ವಿವರವಾದ ವರದಿಯನ್ನು ರೂಪಿಸಿತು.