ಎದುರಿಸಬೇಕಾದಂತಹ ಸಮಸ್ಯೆಗಳು

ಕೆಲಸದ ಪುನರಾವರ್ತನೆ ಮತ್ತು ಪ್ರತಿ ಮಾಡುವಿಕೆಯನ್ನು ತಪ್ಪಿಸಲು ಕಮಿಷನ್ ಫಾರ್ ಸೈಂಟಿಫಿಕ್ ಆಂಡ್ ಟೆಕ್ನಿಕಲ್ ಟರ್ಮಿನಾಲಜಿ (CSTT), ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ಆಂಡ್ ರಿಸರ್ಚ್ ಟ್ರೇನಿಂಗ್ (NCERT), ರಾಷ್ಟ್ರೀಯ ಪುಸ್ತಕ ಪ್ರಾಧಿಕಾರ (NBT), ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC), ಸಾಹಿತ್ಯ ಅಕಾಡೆಮಿ, ಭಾರತೀಯ ಭಾಷಾ ಸಂಸ್ಥಾನ, ಮೈಸೂರು, ಗ್ರಂಥ್ ಅಕಾಡೆಮಿಕ್ಸ್, ಸಾರ್ವಜನಿಕ ಗ್ರಂಥಾಲಯ ಜಾಲಗಳಂತಹ ಅನೇಕ ಸಂಸ್ಥೆಗಳ ಸಹಕಾರ ಮತ್ತು ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುವುದು ಮತ್ತು ಅಂತಹುದೇ ಆದಂತಹ ಸಂಯೋಜನೆಯನ್ನು ಪ್ರಕಾಶಕರು, ವೃತ್ತಪತ್ರಿಕೆಗಳು/ ಮಾಧ್ಯಮಗಳು, ಕಾರ್ಪೊರೆಟ್ ಸಂಘಗಳು, ಪುಸ್ತಕ ಮಾರಾಟಗಾರರ ಜೊತೆ ಕೂಡ ಹೊಂದುವ ಅವಶ್ಯಕತೆ ಇದೆ. ಸಾರ್ವಜನಿಕ ಸಂಸ್ಥೆಗಳು ಮತ್ತು ಖಾಸಗೀ ಏಜೆಂಟರುಗಳಲ್ಲಿ ಸಹಕ್ರಿಯೆಯನ್ನು ಬೆಳೆಸುವುದರ ಮುಖಾಂತರ ಅವುಗಳನ್ನು ಕಾರ್ಯಾತ್ಮಕ ನೀತಿಯಲ್ಲಿ ತೊಡಗಿಸಿಕೊಳ್ಳುವುದು ಇಲ್ಲಿನ ಉದ್ದೇಶವಾಗಿದೆ.

NTM ನಿಂದ ಸಂಬೋಧಿಸಲ್ಪಡಬೇಕಾದ ವಿಷಯಗಳ ವಿವರಗಳು ಈ ಕೆಳಗಿನಂತಿವೆ:

ಅ. ವೈಜ್ಞಾನಿಕ ಮತ್ತು ತಾಂತ್ರಿಕ ಪದಕೋಶವನ್ನು ಸೃಷ್ಟಿಸುವುದು

ಭಾರತವು ಬಹುಭಾಷಾ ಪರಿಸರವನ್ನು ಹೊಂದಿರುವುದರಿಂದಾಗಿ ಇಲ್ಲಿ ವಿವಿಧ ಭಾಷೆಗಳ ನಡುವೆ ಯಾವುದೇ ತರಹದ ಶ್ರೇಣಿ ವ್ಯವಸ್ಥೆಯ ತಾರತಮ್ಯಗಳನ್ನು ಸೃಷ್ಟಿಸದೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡಲು ಸಾಕಷ್ಟು ಅವಕಾಶಗಳು ಲಭ್ಯವಿದೆ. ಇದನ್ನು ಸಾಧ್ಯಮಾಡಲು ಅನೇಕ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಅವಶ್ಯಕತೆ ಇದೆ
ಜ್ಞಾನಾಧಾರಿತ ಪಠ್ಯಪುಸ್ತಕಗಳನ್ನು ಭಾಷಾಂತರ ಮಾಡುವಾಗ ನೆನಪಿನಲ್ಲಿಡಬೇಕಾದ ಒಂದು ಅತೀ ಅವಶ್ಯಕ ಅಂಶವೆಂದರೆ ಬಳಸಬೇಕಾದ ಪದಕೋಶಗಳ ಶಿಷ್ಟೀಕರಣ ಮತ್ತು ಪ್ರಮಾಣೀಕರಿಸದ ಪದಗಳು, ಅಶಿಷ್ಟ ಪದಗಳು ಮತ್ತು ಪರಿಕಲ್ಪನೆಗಳ ಬಳಕೆಯನ್ನು ತಡೆಗಟ್ಟುವುದು. ಹೀಗೆ ಮಾಡುವುದರಿಂದ ಭಾಷೆಯಿಂದ ಭಾಷೆಗಳ ನಡುವಿನ ವಿನಿಮಯವು ಸರಾಗವಾಗಿ ನಡೆಯಲ್ಪಡುತ್ತದೆ. NTM ನಿಂದ ಸಂಬೋಧಿಸಲ್ಪಡಬೇಕಾದ ಅತೀ ದೊಡ್ಡ ಸವಾಲುಗಳಲ್ಲಿ ಇದೂ ಒಂದಾಗಿದೆ.

ಆ. ಅನುವಾದಕರಿಗೆ ಶಿಕ್ಷಣ

ಭಾಷಾಂತರವು ತನ್ನಲ್ಲೇ ಒಂದು ತಜ್ಞಾಪೂರ್ಣವಾದ ಕಾರ್ಯವಾಗಿದೆ, ಮತ್ತು ಒಂದು ಶಾಸ್ತ್ರದಿಂದ ಮತ್ತೊಂದು ಶಾಸ್ತ್ರಕ್ಕೆ ಭಾಷಾಂತರ ಮಾಡುವುದು ಮತ್ತಷ್ಟು ಪ್ರಾವೀಣ್ಯತೆಯನ್ನು ಕೋರುತ್ತದೆ. ಈ ನಿಟ್ಟಿನಲ್ಲಿ ಅನುವಾದಕರಿಗೆ ಶಿಕ್ಷಣವನ್ನು ಒದಗಿಸುವ ಸಲುವಾಗಿ NTM ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು.
1. ವ್ಯಾಖ್ಯಾನ, ಉಪಶೀರ್ಷಿಕೆಗಳನ್ನು ಕೊಡುವುದು, ಕಾನೂನು, ಅಪ್ಪಟ ವಿಜ್ಞಾನ, ಅನ್ವಯಿಕ ವಿಜ್ಞಾನ, ಸಾಮಾಜಿಕ ವಿಜ್ಞಾನ ಮುಂತಾದವುಗಳನ್ನು ಅನುವಾದಸಿವ ನಿರ್ದಿಷ್ಟ ಉದ್ದೇಶಗಳಿಗಾಗಿ ಆಯಾಯ ಕ್ಷೇತ್ರಗಳ ತಜ್ಞರನ್ನು ಒಳಗೊಂಡಂತಹ ಅಲ್ಪಾವಧಿಯ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
2. ದೇಶದೆಲ್ಲೆಡೆ ಭಾಷಾ ಬೋಧನಾ ಕಾರ್ಯಕ್ರಮಗಳು ಅಥವ ರಜೆ ದಿನಗಳಲ್ಲಿ ಕೆಲಸದ ನಂತರ ಅಥವ ತರಗತಿಗಳ ನಂತರ ವಿಶೇಷ ಕೋರ್ಸ್ಗಳಾಗಿ ಸೇರಿಸಿಕೊಳ್ಳಬಲ್ಲ ಕೋರ್ಸ್ ಘಟಕಗಳು ಮತ್ತು ಪ್ಯಾಕೇಜ್ಗಳನ್ನು ರಚಿಸುವುದು.
3. ಅನುವಾದ ತಂತ್ರಜ್ಞಾನ ಮತ್ತು ಇತರೆ ಸಂಬಂಧಿತ ಕ್ಷೇತ್ರಗಳಲ್ಲಿನ ಪರಿಣತ ಕೋರ್ಸ್ಗಳನ್ನು ವಿಶ್ವವಿದ್ಯಾನಿಲಯಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸುವ ಕಾರ್ಯವನ್ನು ಪ್ರೋತ್ಸಾಹಿಸುವುದು, ಬೆಂಬಲಿಸುವುದು ಮತ್ತು ಈ ಕಾರ್ಯದಲ್ಲಿ ನೆರವಾಗುವುದು.
4. ಕೆಲವು ಗೊತ್ತುಪಡಿಸಿದ ಪಠ್ಯಗಳ ಒಳ್ಳೆಯ ಭಾಷಾಂತರಗಳನ್ನು ಉದಾಹರಣೆಗಳಾಗಿ ಲಭ್ಯವಾಗುವಂತೆ ಮಾಡಲು ಮತ್ತು ಬೋಧಕ ವೃತ್ತಿಯ ಉದ್ದೇಶಗಳಿಗಾಗಿ ಸಂಪನ್ಮೂಲಗಳನ್ನು ಸೃಷ್ಟಿಸಲು, ವಿದ್ಯಾರ್ಥಿಗಳ ಸಂಶೋಧನೆಯನ್ನೂ ಸೇರಿ, ಸಂಶೋಧನಾ ಯೋಜನೆಗಳನ್ನು ಪ್ರೋತ್ಸಾಹಿಸುವುದು.
5. ಭಾರತೀಯ ಭಾಷೆಗಳ ನಡುವಿನ ಅನುವಾದ ಕಾರ್ಯವನ್ನು ಪ್ರೋತ್ಸಾಹಿಸುವುದರ ಸಲುವಾಗಿ ವಿವಿಧ ಸಂಸ್ಥೆಗಳ ನಡುವೆ ವಿದ್ವಾಂಸರ ವಿನಿಮಯವನ್ನು ಸುಲಭಸಾಧ್ಯಪಡಿಸಲು ಫೆಲೋಷಿಪ್ ಕಾರ್ಯಕ್ರಮಗಳನ್ನು ಸ್ಥಾಪಿಸುವುದು.
6. ಕೆಲವು ಪಠ್ಯಗಳನ್ನು ಉದಾಹರಣೆಗಳಾಗಿಟ್ಟುಕೊಂಡು ಕಾರ್ಯಗಾರಗಳನ್ನು ಏರ್ಪಡಿಸುವುದು. ಇಂತಹ ಕಾರ್ಯಗಾರಗಳಲ್ಲಿ ಪರಿಣತರು ಮತ್ತು ತರಬೇತುದಾರರು ಒಗ್ಗೂಡಿ ಚರ್ಚಿಸುವುದರ ಮುಖಾಂತರ ಪಠ್ಯದ ಜ್ಞಾನವಿಷಯ, ಪದಕೋಶ, ಸಾಂಸ್ಕೃತಿಕ ಮತ್ತು ಭಾಷಾಸನ್ನಿವೇಶ ಇತ್ಯಾದಿಗಳ ಬಗೆಗಿನ ಕೆಲವು ವಿವಾದಾಂಶಗಳನ್ನು ಬಗೆಹರಿಸುವರು.
7. ಅನುವಾದಗಳನ್ನು ವಿಮರ್ಶಿಸುವುದು, ಸಂಪಾದಿಸುವುದು ಮತ್ತು ಅಚ್ಚುಪಡಿ-ಸಂಪಾದಿಸುವುದರ ಬಗೆಗೆ ಕಾರ್ಯಗಾರಗಳನ್ನು ಏರ್ಪಡಿಸುವುದು.

ಇ. ಮಾಹಿತಿ ಪ್ರಸರಣ:

ಭಾರತದಲ್ಲಿ ಲಭ್ಯವಿರುವ ಭಾಷಾಂತರ ಸಾಮರ್ಥ್ಯತತೆಯ ಬಗೆಗೆ ಎಲ್ಲಾ ಮಾಹಿತಿಯನ್ನು ಪಡೆಯಲು ಒಂದು ಮೂಲವು ಇಲ್ಲದಿರುವುದರಿಂದಾಗಿ ಇದರ ಬಗೆಗೆ ಇರುವ ತಿಳುವಳಿಕೆಯೂ ಕೊರತೆಯುಳ್ಳದ್ದಾಗಿದೆ. ಆಂಗ್ಲ ಅನುವಾದಕರು ವಿಶಾಲ ಭಾರತೀಯ ಸ್ತರದಲ್ಲಿ ಹೆಚ್ಚು ಗೋಚರತೆಯನ್ನು ಅನುಭೋಗಿಸುವುದರಿಂದಾಗಿ ಮೇಲೆ ಹೇಳಿದ ತಿಳುವಳಿಕೆಯ ಕೊರತೆಯು ನಿರ್ದಿಷ್ಟವಾಗಿ ಪ್ರಾದೇಶಿಕ ಭಾಷಾ ಅನುವಾದಕರ ವಿಷಯದಲ್ಲಿ ಸತ್ಯವಾಗಿದೆ.

ಅನುವಾದದಲ್ಲಿ ಲಭ್ಯವಿರುವ ಪಠ್ಯಗಳ ಬಗ್ಗೆ ತಿಳಿಯಲು ಮತ್ತು ಈ ನಿಟ್ಟಿನಲ್ಲಿ ಲಭ್ಯವಿರುವ ನೈಪುಣ್ಯತೆಯನ್ನು ಕಂಡು ಹಿಡಿಯಲು ಇರುವ ತೊಂದರೆಗಳನ್ನು NTM ಹೀಗೆ ಸಂಬೋಧಿಸಬಹುದು:
1. ವಿವಿಧ ಶಾಸ್ತ್ರಗಳು ಮತ್ತು ಕ್ಷೇತ್ರಗಳಲ್ಲಿ ಅನೇಕ ರೀತಿಯ ನಿಪುಣತೆ ಮತ್ತು ಅರ್ಹತೆಗಳನ್ನು ಹೊಂದಿರುವ ಅನುವಾದಕರ ಬಗೆಗೆ ಮಾಹಿತಿ ಭಂಡಾರವನ್ನು ಸೃಷ್ಟಿಸುವುದು;
2. ಈಗಾಗಲೇ ಲಭ್ಯವಿರುವ ಭಾರತೀಯ ಭಾಷೆಗಳ ವಿವಿಧ ಕೃತಿಗಳ ಅನುವಾದಗಳ ಬಗೆಗೆ ಮತ್ತು ಆಂಗ್ಲ ಭಾಷೆಯಲ್ಲಿರುವ ಭಾರತೀಯ ಮತ್ತು ಇತರೆ ವಿದೇಶಿ ಭಾಷೆಗಳ ಕೃತಿಗಳೂ ಸೇರಿದಂತೆ ಒಂದು ಆನ್ಲೈನ್ ಗ್ರಂಥಸೂಚಿಯನ್ನು ರಚಿಸುವುದು. ಈ ಆನ್ಲೈನ್ ಗ್ರಂಥಸೂಚಿಯು ವಿವಿಧ ಶಾಸ್ತ್ರಗಳು, ಭಾಷೆಗಳು ಮತ್ತು ಕ್ಷೇತ್ರಗಳನ್ನು ಆಧರಿಸಿದ ಮತ್ತು ಬಳಕೆದಾರರು ದತ್ತ ಮಾಹಿತಿಯನ್ನು ಒದಗಿಸುವ ಸೌಕರ್ಯವಿರುವ ಹುಡುಕಾಟದ ಸೌಲಭ್ಯಗಳನ್ನು ಹೊಂದಿರಬೇಕು. ಈ ಮೇಲಿನ ಎರಡನ್ನೂ ವಿಶ್ವವಿದ್ಯಾನಿಲಯಗಳು, ಪ್ರಕಾಶಕರು, ರಾಷ್ಟ್ರೀಯ ಗ್ರಂಥಾಲಯಗಳು, ಅಕಾಡೆಮಿಗಳು, ರಾಷ್ಟೀಯ ಪುಸ್ತಕ ಪ್ರಾಧಿಕಾರ (NBT) ಮತ್ತು ಕಮಿಷನ್ ಫಾರ್ ಸೈಂಟಿಫಿಕ್ ಆಂಡ್ ಟೆಕ್ನಿಕಲ್ ಟರ್ಮಿನಾಲಜಿ (CSTT) ಇತ್ಯಾದಿಗಳ ಜೊತೆಗಿನ ಸಂಯೋಜನೆಯೊಡನೆ ಇತ್ತೀಚಿನ ಮಾಹಿತಿಗಳನ್ನು ಸೇರಿಸುವುದರ ಮುಖಾಂತರ ಆಧುನಿಕಗೊಳಿಸಬೇಕು.

ಸಾಹಿತ್ಯ ಅಕಾಡೆಮಿಯು ಸಿದ್ಧಪಡಿಸಿರುವ ಸಾಹಿತ್ಯ ಕೃತಿಗಳ ಅನುವಾದಗಳ ಗ್ರಂಥಸೂಚಿಯು CIILನ ಅನುಕೃತಿ ವೆಬ್ಸೈಟ್ನಲ್ಲಿ ಈಗಾಗಲೇ ಲಭ್ಯವಿದೆ. ಸಾಹಿತ್ಯ ಅಕಾಡೆಮಿಯು ಪ್ರಕಟಿಸಿರುವಂತಹ ಅನೇಕ ಭಾರತೀಯ ಭಾಷೆಗಳ ಅನುವಾದಕರ ರೆಜಿಸ್ಟರ್ಅನ್ನು ಸಹ NTMನ ವೆಬ್ಸೈಟ್ನಲ್ಲಿ ಸೇರಿಸಿಕೊಳ್ಳಬಹುದು. ಮೇಲಿನ ಎರಡನ್ನೂ ಹೊಸದಾಗಿ ಮನ್ನಣೆ ಪಡೆದಿರುವ ಭಾರತೀಯ ಭಾಷೆಗಳನ್ನು ಸೇರಿಸಿಕೊಳ್ಳವುದರ ಮುಖಾಂತರ ವಿಸ್ತರಿಸಿ ಆಧುನಿಕಗೊಳಿಸಬೇಕು. ಇವುಗಳು ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರುವುದರಿಂದಾಗಿ, ಬೇರೆ ಕ್ಷೇತ್ರಗಳ ಅನುವಾದಕರು ಮತ್ತು ಅನುವಾದಗಳ ಪಟ್ಟಿಯನ್ನು ಹೊಸದಾಗಿ ವೃದ್ಧಿಪಡಿಸುವ ಅವಶ್ಯಕತೆ ಇದೆ. ಇದಕ್ಕಾಗಿ NTM ಭಾರತದ ವಿವಿಧ ಭಾಗಗಳಿಂದ ಸಂಗ್ರಾಹಕರು ಮತ್ತು ಸಂಪಾದಕರನ್ನು ನೇಮಿಸಿಕೊಳ್ಳಬಹುದು.

ಈ. ಪಾರದರ್ಶಕತೆ ಮತ್ತು ಕಾರ್ಯಸಾಧ್ಯತೆ

ಅನುವಾದಗಳು ಮತ್ತು ಅನುವಾದಕರು ಹೆಚ್ಚು ಗೋಚರವಾಗುವ ಅವಶ್ಯಕತೆಯಿದೆ. ಇದು ಮತ್ತೊಮ್ಮೆ ಹೊಸದಾಗಿ ಪರಿಶೀಲಿಸಬೇಕಾಗಿರುವ ಅನುವಾದಕರ ಸಂಭಾವನೆಯ ಹಂತಗಳಿಗೂ ಕೂಡ ಸಂಬಂಧಪಟ್ಟಿದೆ. ಕ್ರಮೇಣವಾಗಿ ಭಾರತದಲ್ಲಿ ಅನುವಾದ ಉದ್ದಿಮೆಯನ್ನು ಹೊಂದುವ ಸಲುವಾಗಿ, ನಾವೀಗ ಭಾಷಾಂತರ ಕಾರ್ಯವನ್ನು ಒಂದು ಉದ್ಯೋಗವನ್ನಾಗಿಸುವ ದಿಶೆಯಲ್ಲಿ ಯೋಚಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ, ಯಾವುದೇ ಕ್ಷೇತ್ರವು ಅವರದಾದರೂ ಸರಿ, ಅನುವಾದಕರು ಭಾಷಾಂತರ ಕಾರ್ಯ ಒಂದರಿಂದಲೇ ಯೋಗ್ಯ ಜೀವನವನ್ನು ನಡೆಸುವಂತಾಗುವ ಸನ್ನಿವೇಶವನ್ನು ನಾವು ಸೃಷ್ಟಿಸಬೇಕು.

ಬೇರೆ ಬೇರೆ ಕ್ಷೇತ್ರಗಳಲ್ಲಿರುವ ಅನುವಾದಕರನ್ನು NTM ನಲ್ಲಿ ನೊಂದಣಿ ಮಾಡಿಕೊಳ್ಳುವಂತೆ ಮಾಡಲು ಒಂದು ಕಾರ್ಯನೀತಿಯನ್ನು ವಿಕಸಿಸಬಹುದು. ಇದು ಗುಣಮಟ್ಟ ನಿಯಂತ್ರಣ ಮತ್ತು ಉತ್ಕೃಷ್ಟತೆಯನ್ನು ಮಾನ್ಯ ಮಾಡಲು ನೆರವಾಗುತ್ತದೆ. ಅನುವಾದದ ಗುಣಮಟ್ಟವನ್ನು ಪರಿಶೀಲಿಸಲು ಮತ್ತು ಅನುವಾದಕನು ನೊಂದಣಿ ಮಾಡಿಕೊಳ್ಳಲು ಮತ್ತು ರಾಷ್ಟ್ರೀಯ ಸಮುದಾಯದಲ್ಲಿ ಸೇರಿಸಲ್ಪಡಲು ಅರ್ಹನೇ ಎಂದು ತೀರ್ಮಾನಿಸುವ ಈ ಮೌಲ್ಯಮಾಪನ ಮಂಡಳಿಗಳು ಆಯಾಯ ಕ್ಷೇತ್ರಗಳ ಪರಿಣತರು, ಮೂಲ ಮತ್ತು ಸ್ವೀಕರ್ತ ಭಾಷೆಗಳ ತಜ್ಞರು ಮತ್ತು ಪ್ರಬುದ್ಧ ಓದುಗರನ್ನು ಒಳಗೊಳ್ಳಬಹುದು. ಇವರಿಗೆ ಅಧಿಕೃತ ಮನ್ನಣೆ ಅಥವ ಪ್ರಮಾಣಿಕರಣದ ಸೌಲಭ್ಯವನ್ನು ಕೊಡಬಹುದು ಮತ್ತು NTM ವೆಬ್ಸೈಟ್ನಲ್ಲಿ ಅವರ ಹೆಸರುಗಳನ್ನು ತೋರಿಸಲಾಗುತ್ತದೆ.

ಉ. ಅನುವಾದದ ಲಭ್ಯತೆಯನ್ನು ದೃಢಪಡಿಸುವುದು ಮತ್ತು ಅದನ್ನು ಪ್ರಚಾರಪಡಿಸುವುದು:

ಅನುವಾದಗಳನ್ನು ಪ್ರೋತ್ಸಾಹಿಸಲು ಮತ್ತು ಅವುಗಳು ಗೋಚರವಾಗುವಂತೆ ಮಾಡಲು ಇರುವ ಇತರೆ ಕೆಲವು ಸಾಧನೋಪಾಯಗಳೆಂದರೆ:
1. ಅನುವಾದಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ಏರ್ಪಡಿಸುವುದು
2. ಅನುವಾದ ಬಹುಮಾನಗಳು ಮತ್ತು ಫೆಲೋಷಿಪ್ಗಳನ್ನು ಸ್ಥಾಪಿಸುವುದು
3. ಅನುವಾದಗಳ ಓದು, ಚರ್ಚೆ, ಪುಸ್ತಕ ಪ್ರದರ್ಶನಗಳು ಕ್ಷೇತ್ರದ ಅನುವಾದಕರನ್ನು ಸನ್ಮಾನಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನೊಳಗೊಂಡ ಪ್ರಾದೇಶಿಕ ಅನುವಾದ ಹಬ್ಬ(ಅನುವಾದ ಮೇಳ)ಗಳನ್ನು ಏರ್ಪಡಿಸುವುದು
4. ಒಳ್ಳೆಯ ಗುಣಮಟ್ಟದ ಅನುವಾದಗಳಿಗೆ ಪ್ರಾರಂಭಿಕ ಮಾರುಕಟ್ಟೆಯನ್ನು ಖಾತರಿಪಡಿಸಲು ಗ್ರಂಥಾಲಯ ಜಾಲಗಳೊಂದಿಗೆ ಸಂಪರ್ಕ ಬೆಳೆಸುವುದು
5. ಪ್ರಕಾಶಕರು, ಲೇಖಕರು ಮತ್ತು ಅನುವಾದಕರ ಮನವಿಯ ಮೇರೆಗೆ NTMನ ಸಹಾಯಾನುದಾನ ಯೋಜನೆಯಡಿಯಲ್ಲಿ ಪುನರ್ಖರೀದಿ ವ್ಯವಸ್ಥೆಯನ್ನು ಏರ್ಪಡಿಸುವುದು
6. ಭಾಷಾಂತರ ಕಾರ್ಯವನ್ನು ಪ್ರೋತ್ಸಾಹಿಸಲು NTM ನ ಸಹಾಯ ಅನುದಾನ ಯೋಜನೆಯಡಿಯಲ್ಲಿ ಅನುವಾದಕರು ಮತ್ತು ಪ್ರಕಾಶನಗಳಿಗೆ ಸಬ್ಸಿಡಿಯನ್ನು ನೀಡುವುದು
7. ಅನುವಾದವಾಗಿರುವ ಶೈಕ್ಷಣಿಕ ವಿಷಯ ಸಾಮಗ್ರಿಯನ್ನು ಮುಕ್ತ ಆಕರ ಸೈಟೊಂದರಿಂದ ಅಥವ ಪ್ರಕಾಶಕರಿಗೆ ಪ್ರತೀ ಡೌನ್ಲೋಡ್ಗೆ ನಿಗದಿ ಪಡಿಸಿದ ಹಾಗೆ ಅತ್ಯಲ್ಪ ಶುಲ್ಕವನ್ನು ಪಾವತಿ ಮಾಡುವುದರ ಮುಖಾಂತರ ಡೌನ್ಲೋಡಿಂಗ್ ಸೌಲಭ್ಯವನ್ನು ಒದಗಿಸುವುದು
8. ಅನುವಾದಕರು, ಭಾಷಾಂತರದಲ್ಲಿ ಪ್ರಾವೀಣ್ಯತೆಯನ್ನು ಒದಗಿಸುತ್ತಿರುವ ವಿಶ್ವವಿದ್ಯಾನಿಲಯಗಳ ವಿಭಾಗಗಳು, ಹೆಚ್ಚು ಹೆಚ್ಚು ಅನುವಾದಗಳನ್ನು ಹೊರತರಲು ಇಚ್ಛೆಯಿರುವ ಪ್ರಕಾಶಕರು, ಖಾಸಗೀ ಮತ್ತು ಸಾರ್ವಜನಿಕ ವಲಯಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅನುವಾದಗಳನ್ನು ಖರೀದಿಸುವವರ ಅಥವ ಬಳಕೆದಾರರ ನಡುವೆ ಅಂತರ ಸಂಪರ್ಕವನ್ನು ಒದಗಿಸುವುದು
9. ಅನುವಾದಕ್ಕೆ ಮಹತ್ವವನ್ನು ನೀಡುವ ಆಂಗ್ಲ ಮತ್ತು ಭಾರತೀಯ ಭಾಷೆಗಳಲ್ಲಿರುವ ನಿಯತಕಾಲಿಕಗಳು; ಅಥವ ಈ-ವಸ್ತುವಿಷಯಗಳನ್ನು ಅನುವಾದದಲ್ಲಿ ಹೊರತರುವ ಕಾರ್ಯದಲ್ಲಿ ತೊಡಗಿರುವ ನಿಯತಕಾಲಿಕಗಳು ಅಥವಾ ಮುಖ್ಯವಾದ ವೃತ್ತಿಪರ ನಿಯತಕಾಲಿಕೆಗಳು; ಅಥವಾ ಆಂಗ್ಲಭಾಷೆಯಲ್ಲಿ ಧಾರವಾಹಿ ಪ್ರಕಟಣೆಗೊಳ್ಳುವ ಅನೇಕ ಶಾಸ್ತ್ರಗಳ ನಿಯತಕಾಲಿಕೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟಿಸುತ್ತಿರುವ ನಿಯತಕಾಲಿಕಗಳ ಪ್ರಕಾಶನಕ್ಕೆ ಸಹಾಯ ಅನುದಾನ ಸಬ್ಸಿಡಿಗಳನ್ನು ನೀಡುವುದು.
10. ಅನುವಾದಿತ ವಿಷಯ ಸಾಮಗ್ರಿಗಳನ್ನು ರಾಷ್ಟ್ರೀಯ/ಪ್ರಾದೇಶಿಕ ವ್ಯಾಸಂಗ ವಿಷಯ ಚೌಕಟ್ಟಿನಲ್ಲಿ ಮತ್ತು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ಪಠ್ಯಕ್ರಮಗಳಲ್ಲಿ ಅಂತರ್ಗತ ಮಾಡಿಕೊಳ್ಳಲು ಸಲಹೆಯನ್ನು ನೀಡುವುದು ಮತ್ತು ಪ್ರೇರೇಪಿಸುವುದು.
11. ಎಲ್ಲಾ ಹಂತಗಳ ಶೈಕ್ಷಣಿಕ ಸಂಸ್ಥೆಗಳಲ್ಲೂ ಅನುವಾದಿತ ಪುಸ್ತಕಗಳ ಬಗೆಗಿನ ಪುಸ್ತಕ ಕಾರ್ನರ್ಗಳು ಮತ್ತು ಭಾಷಾ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲು ನೆರವು ನೀಡುವುದು.
12. ಪರೀಕ್ಷೆಗಳು ಮತ್ತು ಉದ್ಯೋಗ ಪರೀಕ್ಷೆಗಳೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದ್ವಿಭಾಷೆ/ಬಹು ಭಾಷಾ ಕೌಶಲಗಳ ಬಳಕೆಯ ಮಹತ್ವವನ್ನು ತೋರ್ಪಡಿಸುವುದು.
13. ಸಾರ್ವಜನಿಕ ಮತ್ತು ಸರ್ಕಾರಿ ಸಂಸ್ಥೆಗಳ ಜೊತೆ ಸಂಪರ್ಕವನ್ನು ಬೆಳೆಸುವುದರ ಮುಖಾಂತರ ಅನುವಾದಿತ ವಿಷಯ ಸಾಮಗ್ರಿಗಳು ಹೆಚ್ಚಿನ ಪ್ರಮಾಣದಲ್ಲಿ, ಅದರಲ್ಲೂ ಭಾರತದ ಚಿಕ್ಕ ಚಿಕ್ಕ ಪಟ್ಟಣ ಮತ್ತು ಹಳ್ಳಿಗಳಲ್ಲಿ ಲಭ್ಯವಾಗುವುದನ್ನು ಖಾತರಿಪಡಿಸುವುದು